
ಕನ್ನಡ ಚಿತ್ರಜಗತ್ತಿನ ಧ್ರುವ ತಾರೆ
ಚಿತ್ರಜಗತ್ತಿನ ನಿರ್ಮಲ ಚಿತ್ತವೇ,
ಬದುಕು ಕಟ್ಟಿಕೊಡುವ ಸುಂದರ ಕನಸುಗಳನ್ನು, ಅದು ತಂದೊಡ್ಡುವ ಅನೇಕ ಕ್ಲಿಷ್ಟ್ಕಕರ ಸಂದರ್ಭಗಳನ್ನು, ಬದುಕಿನ ಸೌಂದರ್ಯವನ್ನು ಹೇಗೆ ಅನುಭವಿಸಬೇಕೆಂದೆಲ್ಲ ನಿನ್ನಿಂದ ನಾನು ಕಲಿತುಕೊಂಡೆ. ನಾನು ನಿನ್ನನ್ನು ಬರೀ ಒಬ್ಬ ಕಲಾವಿದನಾಗಿ ನೋಡಲಿಲ್ಲ. ಕಲಾವಿದನಾಗಿ ನಿನ್ನ ಬದುಕು ಇಷ್ಟು ಔನತ್ಯಕ್ಕೇರಲು ನಿನ್ನ ಆ ಹಲವಾರು ವರ್ಷಗಳ ಕಠಿಣ ಪರಿಶ್ರಮವಲ್ಲದೇ ಮತ್ತೇನಿರಲು ಸಾಧ್ಯ..? ೧೯೫೪ರ ಸಂದರ್ಭ, ನೀನು ಚಿತ್ರಜಗತ್ತಿಗೆ ಪ್ರವೇಶಿಸಿದಾಗ ನಿನಗೆ ಗೊತ್ತಿರುವ ಹಾಗೆ ಕಲಾವಿದರ ಅಳಿವು ಉಳಿವು ಅವರುಗಳು ನಟನೆಯ ಮೇಲೆ ಹೆಚ್ಚು ನಿರ್ಭರವಾಗಿರುತ್ತಿತ್ತು. ಆದರೂ ನೀನು ತುಸುವೂ ಕಳವಳಗೊಳ್ಳದೇ ನಿನ್ನ ವಿಭಿನ್ನ ನಟನಾ ಶೈಲಿಯಿಂದ ಕನ್ನಡ ಜನತೆಯ ಮೆಚ್ಚಿನ ರಾಜಕುಮಾರನಾದೆ. ಉದ್ದ ಮೂಗಿನ, ಚಿಗುರು ಮೀಸೆಯ ದಷ್ಟ ಪುಷ್ಟ, ಸದೃಢ ದೇಹದ ನಿನ್ನನ್ನು ಆರಾಧಿಸುವವರ ಗುಂಪೇ ಕರ್ನಾಟಕದಲ್ಲಿ ನೆಲೆಗೊಂಡಿತು. ಬಳಿಕ ನಿನ್ನ ಭಕ್ತಿ ಪ್ರಧಾನವಾದ ಚಿತ್ರಗಳು ಜನರಿಗೆ ಸಮೂಹ ಸನ್ನಿಯನ್ನೇ ಉಂಟುಮಾಡಿದವು. ನೀನು ಭಕ್ತ ಕುಂಬಾರನಾದೆ, ಭಕ್ತ ಕನಕದಾಸನಾದೆ, ಭಕ್ತ ಚೇತನಾದೆ, ಶ್ರೀರಾಮನಾದೆ, ಕೃಷ್ಣನಾದೆ,ಅರ್ಜುನನಾದೆ, ಮಯೂರವರ್ಮನಾದೆ, ವೀರ ಪುಲಿಕೇಶಿಯಾದೆ, ಶ್ರೀ ಕೃಷ್ಣದೇವರಾಯನಾದೆ. ಪುರಾಣದ ಪಾತ್ರಗಳಿಗೆ ಅತೀವವಾದ ಜೀವ ತುಂಬುತ್ತಿದ್ದ ನಿನಗೆ ಪರಕಾಯ ಪ್ರವೇಶ ಮಾದುವ ಕಲೆ ಗೊತ್ತಿದೆ ಎಂದು ಕರ್ನಾಟಕದ ಜನತೆ ಆಗಾಗ ಅಂದುಕೊಳ್ಳುತ್ತಿದ್ದುರಲ್ಲಿ ತಪ್ಪೇನಿಲ್ಲ..
ಕಲೆಗೆ ಜೀವ ನೀಡಿ, ಚಿತ್ರರಸಿಕರ ಮನಸಲ್ಲಿ ಅಚ್ಚಳಿಯದಂತೆ ಉಳಿದ ನೀನು ನಿನ್ನ ಜೀವನವ್ನ್ನೆಲ್ಲಾ ಕೇವಲ ಕನ್ನಡ ಸೇವೆಗೆ ಮುಡಿಪಾಗಿಟ್ಟ ನಿನ್ನ ನಿಶ್ಕಲ್ಮಶ ಕನ್ನಡಾಭಿಮಾನವನ್ನು ನಾನು ಮೆಚ್ಚಿಕೊಂಡು ನಿನ್ನಂತೆ ನನ್ನ ಕೈಲಾದ ಮಟ್ಟಿಗೆ ಕನ್ನಡ ಸೇವೆ ಮಾಡಲು ಇಂದಿನಿಂದಲೇ ಸಂಕಲ್ಪಿಸುತ್ತೇನೆ.
೧೯೯೯ ರಲ್ಲಿ ನಿನ್ನನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ಕಿಂಚಿತ್ತೂ ವಿಚಿಲಿತನಾಗದೇ ,ವಿಹಲ್ವಗೊಳ್ಳದೇ ೧೦೮ ದಿನಗಳನ್ನು ಸವೆಸಿದುದು ನಿನ್ನ ಧೈರ್ಯವೇ ಸರಿ. ಆದರೇ ನೀನು ಇಷ್ಟು ಅವಸರವಸರವಾಗಿ ಇಹಲೋಕ ತ್ಯಜಿಸಿ ನನ್ನನ್ನಗಲುವ ಅನಿವಾರ್ಯತೆಯೇನಿತ್ತು..? ಚಿಕ್ಕಂದಿನಿಂದಲೇ ಸಾಕಷ್ಟು ರೀತಿಯಲ್ಲಿ ಯೋಗಾಸನ ಮಾಡಿ ಸದೃಢನಗಿದ್ದ ನೀನು ಹೀಗೆ ಪ್ರಾಣತ್ಯಾಗ ಮಾಡಿ ನಿನ ಅಭಿಮಾನಿ ದೇವರುಗಳಿಂದ ಪಲಾಯನ ಮಾಡಿದುದು ನನಗ್ಯಾಕೊ ಸರಿಯೆನ್ನಿಸಲಿಲ್ಲ.. ಇವತ್ತೇಕೋ ನಾನು ತುಂಬಾ ಭಾವುಕನಾಗಿದ್ದೇನೆ. ನಿನ್ನ ಎಲ್ಲಾ ಚಿತ್ರಗಳಾನ್ನು ನೋಡಿ ಮುಗಿಸಬೇಕೆಂದಿದ್ದೇನೆ. ನಿನ್ನ ಸುಮಧುರ ಹಾದುಗಳನ್ನು ಆಲಿಸುತ್ತೇನೆ. ನಿನ್ನಂತೆ ಅಭಿನಯಿಸಲು ಪ್ರಯತ್ನಿಸುತ್ತೇನೆ. ನಿನ್ನಂತೆ ಕನ್ನಡಕ್ಕಾಗಿ, ಅಭಿಮಾನ ಮೆರೆಯುತ್ತೇನೆ. ಕರ್ನಾಟಕದ ಆಚೆ ನಿನ್ನ ಪರಿಚಯಿಸಲಿಚ್ಚಿಸುತ್ತೇನೆ. ನಿನ್ನಂತೆ ಬದುಕಲು ಕಲಿಯುತ್ತೇನೆ ಎಂಬ ಅಫಿಡೆವಿಟ್ಟಿನೊಂದಿಗೆ ಈ ಪತ್ರವನ್ನಿಲ್ಲಿಗೆ ಮುಗಿಸುತ್ತೇನೆ..
ಇಂತಿ ನಿನ್ನ ಅಭಿಮಾನಿ
ಚಿನ್ನು